ಅಡ್ರಿನಲಿನ್, ನೋರಡ್ರಿನಲಿನ್
	
ಮೂತ್ರಪಿಂಡದ ಮೇಲಣ (ಅಡ್ರಿನಲ್) ಗ್ರಂಥಿಗಳ ತಿರುಳಿನಲ್ಲಿ (ಮೆಡುಲ್ಲ) ತಯಾರಾಗುವ, ಒಳಸುರಿಕ ಕ್ರಿಯಾಂಶÀಗಳಿವು. ಕಾರ್ಯಕಾರಿ ಅಂಗಗಳಿಗೆ ನರ ಆವೇಗಗಳನ್ನು ಸಾಗಿಸುವ ರಾಸಾಯನಿಕ ನಡುಹಾಯಿಕಗಳಾಗಿ, ಅನುವೇದನಾ (ಸಿಂಪತೆಟಿಕ್) ನರತಂತುಗಳ ಕೊನೆಗಳಲ್ಲೂ ಇವು ಬಿಡುಗಡೆಯಾಗುತ್ತವೆ. ರಾಸಾಯನಿಕವಾಗಿ ಇವರೆಡೂ ಸ್ವಲ್ಪಮಟ್ಟಿಗೆ ಬೇರೆಬೇರೆಯಾದರೂ ಅನುವೇದನಾ ನರಮಂಡಲವನ್ನು ಚೋದಿಸುವುದರಿಂದಾಗುವ ಪ್ರಭಾವಗಳನ್ನು ಹೋಲುವ ಪರಿಣಾಮಗಳನ್ನೇ ತೋರುತ್ತವೆ. ಇದಕ್ಕಾಗಿ ಇವಕ್ಕೆ ಅನುವೇದನ ಅಣಕದ ಕಾರಕಗಳೆಂದು ಹೆಸರಿದೆ. ಅಡ್ರಿನಲ್ ಗ್ರಂಥಿಯ ತಿರುಳಿನಲ್ಲಿ ಹೆಚ್ಚೂ ಕಡಿಮೆ 80% ರಷ್ಟು ಅಡ್ರಿನಲಿನ್ನೂ 20% ರಷ್ಟು ನೋರಡ್ರಿನಲಿನ್ನೂ ಸುರಿವುದು. ಬಹುಪಾಲು ನೋರಡ್ರಿನಲಿನ್ ಒಂದನ್ನೇ ಬಿಡುವ ಅನುವೇದನಾ ನರ ಕೊನೆಗಳಲ್ಲಿ ಇದರ ಅದಲುಬದಲು ಇರುವುದು. 
	
ರೋಗಿಗಳ ಚಿಕಿತ್ಸೆಯಲ್ಲಿ ಬಳಸುವ ಇದರ ಚೊಕ್ಕವಾದ ಚುರುಕಾದ ಸಂಯುಕ್ತಗಳು ಸಾಕಿದ ಪ್ರಾಣಿಗಳ ಗ್ರಂಥಿಗಳ ಸಾರಕವಾಗೋ ಕೃತಕವಾಗೋ ತಯಾರಾಗುತ್ತವೆ. ಅಡ್ರಿನಲಿನ್ ಚುಚ್ಚಿದರೆ ರಕ್ತದ ಒತ್ತಡ ಏರುತ್ತದೆ ; ಗುಂಡಿಗೆ ಕುಗ್ಗುವ ಬಲ, ವೇಗಗಳೂ ಹೆಚ್ಚುವುವಲ್ಲದೆ ಸುತ್ತಂಚಿನ ರಕ್ತನಾಳಗಳೂ ಕುಗ್ಗುತ್ತವೆ. ನವಿರುಸಿರ್ನಾಳಗಳನ್ನು ಹಿಗ್ಗಲಿಸುವುದರಿಂದ ಗೂರಲಿನವರಲ್ಲಿ ಉಸಿರಾಟ ಸರಾಗವಾಗುತ್ತದೆ. ಉಪಾಪಚಯದ (ಮೆಟಬಾಲಿಸಮ್) ಮೇಲಿನ ಪ್ರಭಾವದಿಂದ ಈಲಿಯಲ್ಲಿರುವ (ಲಿವರ್) ಗ್ಲೂಕೋಸನ್ನು ಹೊರತೆಗೆದು ರಕ್ತದಲ್ಲಿ ಹೆಚ್ಚಿಸುತ್ತದೆ. ನೋರಡ್ರಿನಲಿನ್ನಿನ ಪ್ರಭಾವಗಳೂ ಇದೇ ತೆರನಾದರೂ ಜೀವವಸ್ತು ಕರಣದ ಅಲ್ಲದೆ ಗುಂಡಿಗೆಯ ಮೇಲಣ ಪ್ರಭಾವಗಳು ಅಷ್ಟಾಗಿಲ್ಲ. ನೋರಡ್ರಿನಲಿನ್ ರಕ್ತನಾಳದೊಳಕ್ಕೆ ಚುಚ್ಚಿ ಹೊಗಿಸಿದಾಗ ಸರಕ್ಕನೆ ರಕ್ತದ ಒತ್ತಡ ಅತಿಯಾಗಿ ಏರಲು ಕಾರಣ, ರಕ್ತನಾಳಗಳನ್ನು ಬಲವಾಗಿ ಕುಗ್ಗಿಸುವುದೇ. 
	
ಸ್ಥಳಿಯ ಅರಿವಳಿಕಗಳು (ಲೋಕಲ್ ಅನೀಸ್ತೆಟಿಕ್ಸ್) ಬೇಗನೆ ಹೀರಿಹೋಗದಂತೆ, ಅಡ್ರಿನಲಿನ್ ಕಿರಿಯ ಧಮನಿಗಳನ್ನು ಕುಗ್ಗಿಸಿ, ಅರಿವಳಿಕದ ಪ್ರಭಾವ ಮುಂದುವರಿಸಿ, ಅದರ ವಿಷತೆಯನ್ನೂ ಇಳಿಸುವುದರಿಂದ, ತಾವಿನ ಅರಿವಳಿಕಗಳೊಂದಿಗೆ ತುಸು ಅಡ್ರಿನಲಿನ್ ಸೇರಿಸುವುದುಂಟು. ಮದ್ದುಗಳೆದುರಿನ ಪ್ರತಿಕ್ರಿಯೆಗಳು, ತುರುಚೆ ದದ್ದುಗಳು, ಕರಡ ಜ್ವರಗಳಂಥ ತೀವ್ರ ಒಗ್ಗದಿಕೆಯ (ಅಕ್ಯೂಟ್ ಅಲರ್ಜಿ) ಬೇನೆಗಳಲ್ಲೂ ಗುಣಕಾರಕ. ಕೆಲು ಬಗೆಗಳ ಆಘಾತಗಳಲ್ಲಿ (ಷಾಕ್ಸ್) ರೋಗಿ ನಾಡಿ ಬಡಿತ ನಿಂತು ಸುಸ್ತು ಬಿದ್ದಿರುವಾಗ, ರಕ್ತದ ಒತ್ತಡವನ್ನು ಮತ್ತೆ ಏರಿಸಲು ಇದನ್ನು ನಿಧಾನವಾಗಿ ರಕ್ತನಾಳದ ಮುಲಕ ಕೊಡಬಹುದು. ಇವೆರಡನ್ನೂ ಮಿತಿಮೀರಿ ಕೊಟ್ಟರೆ ಮಿದುಳಿನಲ್ಲಿ ರಕ್ತನಾಳ ಒಡೆದು ರಕ್ತಸುರಿತ, ಗುಂಡಿಗೆಯ ಏರುಪೇರುಗಳಾಗಿ ಮಾರಕವಾಗಬಹುದು. ಅಲ್ಲದೆ ಸ್ನಾಯುಗಳ ಬಿಗುಪನ್ನೂ ರಕ್ತದ ಒತ್ತಡವನ್ನೂ ಸಮನಾಗಿ ಇರಿಸಿರಲೂ ಅಡ್ರಿನಲಿನ್ ನೆರವಾಗುವುದು. 
	
ಚರ್ಮ, ಸ್ಥಳೀಯ ಅಂಗಗಳಿಂದ ಹಾಗೂ ದೇಹದ ಇತರ ಅಂಗಗಳ ಲೋಳ್ಪೊರೆ (ಮ್ಯೂಕಸ್‍ಮೆಂಬ್ರೇನ್) ಯಿಂದ ಆಗುವ ರಕ್ತ ಸ್ರಾವ (ಉದಾಹರಣೆಗೆ ಹೊರ ಮೂಗಿನ ಲೋಳ್ಪೊರೆಯಿಂದ ಆಗುವ ರಕ್ತ ಸ್ರಾವ - ಎಪಿಸ್‍ಟ್ಯಾಕ್ಸಿಸ್) ವನ್ನು ಅಡ್ರಿನಲೀನ್ ಹಾಗೂ ಇತರ ಔಷಧಿಗಳಿಂದ ಪಡೆಯಬಹುದು. ಅಡ್ರಿನಲಿನ್ ಕಿರಿಯ ಧಮನಿಗಳನ್ನು ಕುಗ್ಗಿಸಿ ರಕ್ತ ಸ್ರಾವವನ್ನು ಕಡಿಮೆಗೊಳಿಸುತ್ತದೆ.
 
(ನೋಡಿ- ಅಡ್ರಿನಲ್-ಗ್ರಂಥಿಗಳು) 
 (ನೋಡಿ- ಪ್ರಾಣಿಸಾರಕಗಳು)
 (ನೋಡಿ- ಚೋದನಿಕಗಳು)  
                           				 
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ